Psalms 98

ಯೆಹೋವರಾಜನ ರಕ್ಷಣೆಯನ್ನು ಕೊಂಡಾಡುವುದು

(ಕೀರ್ತ. 67)

1ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ;
ಆತನು ಅದ್ಭುತಕೃತ್ಯಗಳನ್ನು ನಡೆಸಿದ್ದಾನೆ.
ಆತನ ಬಲಗೈಯೂ, ಪರಿಶುದ್ಧಬಾಹುವೂ ಜಯವನ್ನು ಉಂಟುಮಾಡಿವೆ.
2 ಯೆಹೋವನು ತನ್ನ ರಕ್ಷಣೆಯನ್ನು ಪ್ರಕಟಿಸಿದ್ದಾನೆ;
ಜನಾಂಗಗಳೆದುರಿಗೆ ತನ್ನ ನೀತಿಯನ್ನು ತೋರ್ಪಡಿಸಿದ್ದಾನೆ.

3

ಆತನು ಇಸ್ರಾಯೇಲನ ಮನೆತನದವರ ಬಗ್ಗೆ ಇದ್ದ,

ತನ್ನ ಪ್ರೀತಿ, ಸತ್ಯತೆಗಳನ್ನು ನೆನಪುಮಾಡಿಕೊಂಡಿದ್ದಾನೆ.
ಭೂಲೋಕದ ಎಲ್ಲಾ ಕಡೆಯವರೂ,
ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡಿದ್ದಾರೆ.
4 ಸಮಸ್ತ ಭೂನಿವಾಸಿಗಳೇ,
ಯೆಹೋವನಿಗೆ ಜಯಘೋಷಮಾಡಿರಿ;
ಹರ್ಷಿಸಿರಿ, ಉತ್ಸಾಹಧ್ವನಿಮಾಡಿ ಹಾಡಿರಿ.

5

ಕಿನ್ನರಿಯೊಡನೆ ಯೆಹೋವನನ್ನು ಸ್ತುತಿಸಿರಿ;

ಕಿನ್ನರಿಯನ್ನು ನುಡಿಸುತ್ತಾ ಭಜಿಸಿರಿ.
6 ತುತೂರಿಗಳನ್ನೂ, ಕೊಂಬನ್ನೂ ಊದುತ್ತಾ,
ಯೆಹೋವರಾಜನಿಗೆ ಜಯಘೋಷಮಾಡಿರಿ.

7

ಯೆಹೋವನ ಮುಂದೆ ಸಮುದ್ರವೂ, ಅದರಲ್ಲಿರುವುದೆಲ್ಲವೂ,

ಭೂಮಿಯೂ, ಅದರ ನಿವಾಸಿಗಳೂ ಘೋಷಿಸಲಿ.
8 ನದಿಗಳು ಚಪ್ಪಾಳೆ ಹೊಡೆಯಲಿ;
ಪರ್ವತಗಳೆಲ್ಲಾ ಉತ್ಸಾಹಧ್ವನಿಮಾಡಲಿ.
9 ಆತನು ಭೂನಿವಾಸಿಗಳಿಗೆ ನ್ಯಾಯತೀರಿಸಲಿಕ್ಕೆ ಬರುತ್ತಾನೆ;
ಆತನು ಲೋಕಕ್ಕೆ ನೀತಿಗನುಸಾರವಾಗಿಯೂ,
ಜನಾಂಗಗಳಿಗೆ ಯಥಾರ್ಥವಾಗಿಯೂ ತೀರ್ಪುಕೊಡುವನು.

Copyright information for KanULB